ಅವೊಗ್ಯಾಡ್ರೊ, ಅಮಡಿಯೊ (1776-1856). 

ಇಟಲಿ ದೇಶದ ಭೌತಶಾಸ್ತ್ರಜ್ಞ. ತುರಿನ್ ನಗರದಲ್ಲಿ ಜನಿಸಿದ. ಅದೇ ಊರಿನ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕನಾದ(1834-1850). 1811ರಲ್ಲಿ ಒಂದು ಹೊಸ ಊಹೆಯನ್ನು ಮುಂದಿಟ್ಟ: ಪರಮಾಣುಗಳಿಂದ ಅಣುಗಳು ರಚಿತವಾಗುತ್ತವೆಯೆಂದೂ ಈ ಅಣುಗಳು ಪದಾರ್ಥದ ಭೌತಗುಣಗಳಿಗೆ ಮೂಲವೆಂದೂ ಈತ ತಿಳಿಸಿದುದು ರಾಸಾಯನಿಕ ಮತ್ತು ಭೌತಶಾಸ್ತ್ರಗಳ ಮುಂದಿನ ಬೆಳವಣಿಗೆಗೆ ಬಹಳ ಸಹಕಾರಿಯಾಯಿತು. ಈತನಿಗೆ ಕಾಂಟೆ ಡಿ ಕ್ವಾರೆಜ್ಞ ಎಂದರೆ ಕ್ವಾರೆಜ್ಞದ ಪ್ರಭು ಎಂಬ ಪದವಿಯಿತ್ತು. ಈತ 1856ರ ಜುಲೈ 9 ರಂದು ಕಾಲವಾದ.					
(ಟಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ